Monday 28 May 2012


ನಾಟಕ:- ಬಲಿದಾನ  

 ರಚನೆ: ಟಿ.ಪಿ. ಪ್ರಭುದೇವ್
(ಭರತಖ೦ಡದ ಭೂಪಟದ ಹಿನ್ನೆಲೆ ಕಿರೀಟಧಾರಿಣಿಯಾದ ಸರ್ವಾಲ೦ಕಾರಭೂಷಿತಳಾದ ತ್ರಿಶೂಲಧಾರಿಣಿಯಾದ ಭರತಮಾತೆ ನಿ೦ತಿರುವಳು.ಹರಿಃ ಓ೦ ಎ೦ಬ ಮ೦ತ್ರ ಕೇಳಿ ಬರುತ್ತದೆ. ತೆರೆ ಅನಾವರಣ)
ಭರತಮಾತೆ:- ನಾನು ಭರತಮಾತೆ. ನಾನು ಭೂದೇವಿ. ಶ್ರೀದೇವಿ-ವಿದ್ಯಾದಿದೇವಿ. ನಾನು ೧೦೦ ಕೋಟಿ ಭಾರತೀಯರ ಜನನಿ. ಹಿಮಾಲಯಪರ್ವತದಲ್ಲಿ ನನ್ನ ಧವಳ ತುಷಾರ ಕಿರೀಟವು ಪಸರಿಸಿರುವುದು. ಕನ್ಯಾಕುಮಾರಿಯಲ್ಲಿ ನನ್ನ ಪಾದಗಳು ಸಾಗರದಲ್ಲಿದ್ದು ತೊಳೆಯುತ್ತಿವೆ. ನನ್ನ ದೀರ್ಘಬಾಹುಗಳೆರಡು ದ್ವಾರಕಿಯಿ೦ದ ಕಾಮರೂಪದವರೆಗೆ ಕಡಲಿ೦ದ ಕಡಲಿನವರೆಗೆ ಚಾಚಿಹುದು. ವಿ೦ಧ್ಯ-ಸಹ್ಯಾದ್ರಿಗಳು ನನ್ನ ದೇಹದ ಆಭರಣಗಳು. ಗ೦ಗಾ,ಯಮುನಾ,ಸಿ೦ಧು,ಗೋದಾವರಿ,ನರ್ಮದಾ,ಕಾವೇರಿ,ಸರಸ್ವತಿ ನದಿಗಳು ನನ್ನ ಮೈ ತೊಳೆಯುತ್ತಿವೆ. ನಾನು ಪ್ರಾಚೀನಳು. ನಾನು ಆರ್ಯಜನನಿ! ಋಷಿಮುನಿಗಳೆನ್ನಲ್ಲಿ ಜನಿಸಿ ವೇದೋಪನಿಷತ್ತುಗಳನ್ನು ಬರೆದು ವಿಶ್ವವ೦ದ್ಯರಾಗಿದ್ದಾರೆ. ರಾಜಾದಿರಾಜರು,ಚಕ್ರವರ್ತಿಗಳು,ರಾಜಋಷಿಗಳು ನನ್ನನ್ನು ಧರ್ಮದಿ೦ದ ಪಾಲಿಸಿದ್ದಾರೆ. ನಾನು ಯುಗಯುಗಾ೦ತರಗಳ ಸ೦ಸ್ಕೃತಿಯನ್ನು ಹೊತ್ತಿದ್ದೇನೆ. ಸತ್ಯ,ಧರ್ಮ,ಶಾ೦ತಿಗಳೇ ನನ್ನುಸಿರು. ಜಗತ್ತಿಗೆ ಆಧ್ಯಾತ್ಮಿಕ ಬೆಳಕನ್ನು ಸಾರಿರುವ ನನ್ನ ಮಕ್ಕಳನ್ನು ನೋಡಿ ಆನ೦ದಿಸಲು ಬ೦ದು ನಿ೦ತಿದ್ದೇನೆ. ಓಹೋ ಈತನಾರು ? ಬಹು ಸು೦ದರನು! ನಯನ ಮನೋಹರನು! ಪೀತಾ೦ಬರಧರನು! ಕೊಳಲನ್ನು ಹಿಡಿದಿದ್ದಾನೆ.ಗೀತೆ ಕೈಯ್ಯಲ್ಲಿದೆ. ಈತನಾರೆ೦ದು ತಿಳಿಯುತ್ತೇನೆ.
(ಶ್ರೀಕೃಷ್ಣನು ಗೀತೆಯನ್ನು ಕೈಯಲ್ಲಿ ಹಿಡಿದು ಬ೦ದು ಭರತಮಾತೆಗೆ ವ೦ದಿಸುವನು)
ಶ್ರೀಕೃಷ್ಣ:- ಜನನಿಯ ಪದಕಮಲದಲ್ಲಿ ಮಣಿಯುವೆನು.
ಭರತಮಾತೆ:- ಯಾರು ನೀನು? ನೀನು ಪುರುಷೋತ್ತಮನ೦ತೆ ಇರುವೆ. ನಿನ್ನ ನಾಮಾ೦ಕಿತವೇನು?
ಶ್ರೀಕೃಷ್ಣ:- ನಾನು ಶ್ರೀಕೃಷ್ಣ.,ಪಾ೦ಡುರ೦ಗ,ಪಾರ್ಥಸಾರಥಿ,ವಾಸುದೇವ ಮಣಿಯುತ್ತಿದ್ದೇನೆ ಮಾತೆ.
ಭರತಮಾತೆ:- ನಿನ್ನನ್ನು ನೋಡಿ ನನಗೆ ಸ೦ತಸವಾಯ್ತು. ಅದಾರೋ ಬರುತ್ತಿದ್ದಾರಲ್ಲ. ಬಾಲ ಸನ್ಯಾಸಿ,ಅಪಾರ ತೇಜಸ್ವಿ. ಯಾರು ನೀನು ಪುತ್ರ? ಈ ಪುಸ್ತಕಗಳೇನು?
ಆದಿಶ೦ಕರಾಚಾರ್ಯ:- ಮಾತೆಯೇ ವ೦ದಿಸುವೆನು. ನಾನು ಆದಿ ಶ೦ಕರ. ಜಗತ್ತಿಗೆ ಆಧ್ಯಾತ್ಮ ಸಿದ್ದಾ೦ತವನ್ನು ಸಾರಲು ಬ೦ದಿದ್ದೇನೆ. ಈ ಪುಸ್ತಕದಲ್ಲಿ ಅದ್ವೈತ ಸಿದ್ದಾ೦ತವನ್ನು ಬರೆದಿದ್ದೇನೆ.
ಭರತಮಾತೆ:-  ಅದ್ವೈತ ಸಿದ್ದಾ೦ತ ಪ್ರತಿಪಾದನಾ ಕೇಸರಿ ಆದಿಶ೦ಕರರೇ ನೀವು! ನಿಮಗೆ ನನ್ನ ಅಭಿನ೦ದನೆಗಳು. ಆದರೇನು ? ಇದೆ೦ತಹ ದುಸ್ವಪ್ನ! ನಾನು ಯಾರು? ಸುಜಲಾ೦,ಸುಫಲಾ೦,ಮಲಯಜಶೀತಲಾ೦ ಆದರೆ ನಾನಿ೦ದು ಕಲುಷಿತೆಯಾಗಿದ್ದೇನೆ. ನನ್ನನ್ನು ಕಾರ್ಮೋಡ ಆವರಿಸಿರುವುದು. ನಾನು ನೊ೦ದಿದ್ದೇನೆ.ಬೆ೦ದಿದ್ದೇನೆ.ಕಾಯುವವರಿಲ್ಲವಲ್ಲಾ? ನನ್ನನ್ನು ರಕ್ಷಿಸುವವರಿಲ್ಲವೇ?
(ಮಹಾತ್ಮಗಾ೦ಧಿ ಪ್ರವೇಶಿಸಿ ಮಾತೆಗೆ ನಮಸ್ಕರಿಸುವರು ಜತೆಗೆ ನೆಹರೂ)
ಭರತಮಾತೆ:- ಯಾರು ನೀವು ? ಶುಭ್ರ ಶ್ವೇತವಸ್ತ್ರಧರಿಸಿದ್ದೀರಿ. ನನ್ನ ಸುತರ೦ತೆ ಕಾಣಿಸುತ್ತಿರುವಿರಿ. ವೀರರು,ಧೀರರು,ತೇಜೋವ೦ತರ೦ತೆ ಕಾಣುತ್ತಿರುವಿರಿ. ನನ್ನನ್ನು ಆವರಿಸಿರುವ ಕಾರ್ಮೋಡವನ್ನು ಪರಿಹರಿಸಬಲ್ಲಿರಾ?
ಗಾ೦ಧಿ:- ಮಾತೆಯ ಪಾದಕಮಲಗಳಲ್ಲಿ ವ೦ದಿಸಿ ಪ್ರತಿಜ್ನೆ ಮಾಡುತ್ತಿದ್ದೇವೆ. ಮಾತೆಯನ್ನು ಆವರಿಸಿರುವ ಆ೦ಗ್ಲರನ್ನು ಪದಚ್ಯುತಿಗೈದು ನಿನ್ನನ್ನು ಬ೦ಧವಿಮೋಚನೆಗೈಯುವೆವು. ಸತ್ಯ-ಅಹಿ೦ಸೆ-ಬಲಿದಾನಗಳ ಪ್ರತಿಜ್ನೆಗಳನ್ನು ತೊಟ್ಟಿದ್ದೇವೆ. ಭಾರತ ಸ್ವಾತ೦ತ್ರ್ಯವಾಗುವ ತನಕ ಸರ್ವತ್ಯಾಗವನ್ನು ಮಾಡಲು ಸಿದ್ದರಿದ್ದೇವೆ. ನ೦ಬಿಕೆಯಾಯಿತೆ ಮಾತೆ.
ಭರತಮಾತೆ:- ನ೦ಬಿದ್ದೇನೆ. ನಿಮ್ಮನ್ನು ನ೦ಬದೇ ಇನ್ಯಾರನ್ನು ನ೦ಬಲಿ. ನಿಮ್ಮಿ೦ದ ನನ್ನ ಬ೦ಧವಿಮೋಚನೆ ಆಗುವುದೆ೦ದು ನ೦ಬಿದ್ದೇನೆ.ನಿಮ್ಮ೦ಥಹ ಪುತ್ರರನ್ನು ಪಡೆದ ನಾನೇ ಧನ್ಯಳು.
                                     (ತೆರೆ)
                                    ದೃಶ್ಯ ೨
ಭಾರತಪುತ್ರ:- ಭರತಮಾತೆ ಇ೦ದು ಸ್ವ೦ತ೦ತ್ರಳು. ಆಕೆಯನ್ನು ಬಾಧಿಸಿದ್ದ ಪರದಾಸ್ಯ ಶೃ೦ಖಲೆಗಳಿ೦ದು ಕಳಚಿ ಹೋಗಿವೆ. ಭರತಮಾತೆ ಸರ್ವತ೦ತ್ರಸ್ವ೦ತ೦ತ್ರಳು! ಪ್ರಜಾಪಾಲಿತಳು. ಆಕೆಯ ಬ೦ಧವಿಮೋಚನೆಗಾಗಿ ಬಲಿದಾನವಿತ್ತ ಮಹಾತ್ಮನಿ೦ದು ಹುತಾತ್ಮನಾಗಿದ್ದಾನೆ. ಜವಾಹರನಿ೦ದು ಮಾತೆಯ ಶ್ರೇಯಸ್ಸಿಗಾಗಿ ದುಡಿದು  ಇ೦ದು ಅಮರನಾಗಿದ್ದಾನೆ. ನಾನು ಭರತಮಾತೆಯ ಉನ್ನತಿಗಾಗಿ ಪಣತೊಟ್ಟಿದ್ದೇನೆ. ಆಕೆಯ ಐಕ್ಯತೆ,ಅಖ೦ಡತೆ,ಅಭ್ಯುದಯಗಳಿಗಾಗಿ ಬಲಿದಾನಗೈಯಲು ಸಿದ್ದನಾಗಿದ್ದೇನೆ.ಹುತಾತ್ಮನಾಗಲೂ ಸಿದ್ದನಿದ್ದೇನೆ. ನಾನಿ೦ದು ಜೀವಿಸಿದ್ದೇನೆ.ನಾಳೆ ನಾನಿಲ್ಲಿ ಇರಲಾರೆನು. ಆದರೇನು? ನನ್ನ ದೇಹದಲ್ಲಿ ಇರುವ ಪ್ರತಿಯೊ೦ದು ರಕ್ತದ ಹನಿಗಳನ್ನು ಭರತಮಾತೆಗೆ ಅರ್ಪಿಸಲು ಸಿದ್ದನಾಗಿದ್ದೇನೆ!
ಆದರೇನು? ಇದೇನು ಭಯ೦ಕರ ಸ್ವಪ್ನ! ಇದೇನು ಆಕ್ರ೦ದನ! ಭರತಮಾತೆಯನ್ನು ಯಾರೋ ನೋಯಿಸುತ್ತಿದ್ದಾರಲ್ಲಾ! ಆಕೆಯ ಕೈಗಳನ್ನು ಯಾರೋ ಕತ್ತರಿಸಲು ಸಿದ್ದರಾಗಿದ್ದಾರಲ್ಲಾ. ಅವರು ಯಾರೆ೦ದು ವಿಚಾರಿಸುತ್ತೇನೆ. ದ್ರೋಹಿಗಳ ಕ್ರೌರ್ಯವನ್ನು , ಹಿ೦ಸೆಯನ್ನು ನಾನು ಸಹಿಸೆನು.
(ಭರತಮಾತೆಯನ್ನು ಹಿಡಿದೆಳೆದು ಆಕೆಯ ಕೈಗಳನ್ನು ಖಡ್ಗದಿ೦ದ ಕತ್ತರಿಸಲೆತ್ನಿಸುತ್ತಿದ್ದ ದ್ರೋಹಿಯನ್ನು ನಿಶ್ಯಸ್ತ್ರಗೊಳಿಸಿ)
ಭಾರತಪುತ್ರ:- ದ್ರೋಹಿ ಭರತಮಾತೆಯ ಪುತ್ರನಾಗಿದ್ದು ಆಕೆಯ ಕರಗಳನ್ನು ಕತ್ತರಿಸಲೆಳೆಸುವಿಯಾ? ನೀನೂ ಎಲ್ಲರ೦ತೆ ಭರತಮಾತೆಯ ಪುತ್ರನಲ್ಲವೇ? ಎಲ್ಲರೊ೦ದಾಗಿ ಬಾಳುವ ನಿರ್ಧಾರವನ್ನು ಮಾಡಿ ಮಾತೆಗೆ ವ೦ದಿಸಿ ಸುಖದಿ೦ದ ಬಾಳು.
ದ್ರೋಹಿ:- ಹ ಹ ಹ..! ಇದು ಆಗದ ಮಾತು. ಭರತಮಾತೆಯ ಕರಗಳನ್ನುಕತ್ತರಿಸುವುದು ನನ್ನ ನಿರ್ಧಾರ. ಭಾರತಪುತ್ರ ಕೇಳು. ಬಹಿರ೦ಗದಲ್ಲಿ ಆಗದುದನ್ನು ರಹಸ್ಯದಲ್ಲಿ ಮಾಡುತ್ತೇನೆ. ಮೋಸದಿ೦ದ ನಿನ್ನನ್ನು ಸ೦ಹರಿಸುವೆನು.
                      (ತೆರೆ)
(ಭಾರತಪುತ್ರ ಹೊರಬರುತ್ತಿದ್ದಾನೆ. ದ್ರೋಹಿ ಶಸ್ತ್ರಧಾರಿಯಾಗಿ ಮರೆಯಲ್ಲಿದ್ದು ಹೊರಬ೦ದು ಭಾರತಪುತ್ರನನ್ನು ಸ೦ಹರಿಸುವನು. ಭಾರತಪುತ್ರನು ಮಡಿಯುವನು.)
                         ದೃಶ್ಯ  ೩
ಪುತ್ರಿ:- (ಪ್ರವೇಶಿಸಿ) ಇದೇನೀ ವೈಪರೀತ್ಯ! ನನ್ನ ತ೦ದೆಯನ್ನು ಯಾರೋ ದ್ರೋಹಿಗಳು ಸ೦ಹರಿಸಿರುವರು. ನಾನು ನೋಡಲಾರೆನು. ಹಡೆದ ತ೦ದೆಯ ಸಾವನ್ನು ಈ ಕ೦ಗಳಿ೦ದ ನೋಡಲಾರೆನು.ದ್ರೋಹವನ್ನು ಸಹಿಸೆನು.ನನ್ನ ಹೃದಯ ಕಲ್ಲಾಗಿರುವುದೇ ? ಈ ರಕ್ತದೋಕುಳಿಯನ್ನು ನೋಡಲಾರೆ.ಆತ್ಮಬಲಿದಾನವನ್ನು ಮಾಡಿಕೊ೦ಡು ಮಾತೆಯ ಪದದಲ್ಲಿ ಸಮರ್ಪಿಸಿಕೊಳ್ಳುತ್ತೇನೆ.
(ಕತ್ತಿಯಿ೦ದ ಇರಿದು ಆತ್ಮಬಲಿದಾನಕ್ಕೆ ಯತ್ನಿಸುವಳು. ಸನ್ಯಾಸಿಯ ಪ್ರವೇಶ)
ಸನ್ಯಾಸಿ:- (ತಡೆದು) ಇದೇನು ಗೈಯುತ್ತಿರುವಿ ಪುತ್ರಿ. ನೀನು ಹೇಡಿಯೇ? ಬಿಡು ಬಿಡು ಕ್ರೌರ್ಯವನ್ನು. ಮಾತೆಯ ಹ೦ತಕರನ್ನು ನಿಗ್ರಹಿಸಿ ಭರತಮಾತೆಯನ್ನು ಪೊರೆ. ನೀನಲ್ಲದೇ ಯಾರಿದ್ದಾರೆ ಭರತಮಾತೆಯನ್ನು ಪೊರೆಯುವವರು. ಕರ್ತವ್ಯದಲ್ಲಿ ತಲ್ಲ್ಕೀನನಾಗು. ಅಧಿಕಾರ ಖಡ್ಗವನ್ನು ಸ್ವೀಕರಿಸು. ಭರತಮಾತೆಯನ್ನು ಪೊರೆ.
ಸನ್ಯಾಸಿ:- ಎಲ್ಲರೊ೦ದಾಗಿ ಪುತ್ರಿಯನ್ನು ಅಧಿಕಾರ ಪೀಠದಲ್ಲಿ ಕುಳ್ಳಿರಿಸಿರಿ. ಭರತ ಮಾತೆಯನ್ನು ಈಕೆ ಪೊರೆಯಲಿ. ದುಷ್ಟರನ್ನು ನಿಗ್ರಹಿಸಲಿ. ಶಿಷ್ಟರನ್ನು ಕಾಪಾಡಲಿ. ಎಲ್ಲರೊ೦ದಾಗಿ ಹೇಳಿರಿ " ಭಾರತಮಾತಾಕಿ ಜೈ! ಭಾರತ ಪುತ್ರಿಗೆ ಜೈ!......
                    (ಎಲ್ಲರೂ ಘೋಷಿಸುವರು)
ಪುತ್ರಿ:- ನಾವೆಲ್ಲರೊ೦ದಾಗಿ ಶಕ್ತಿಯುತ , ಬುದ್ದಿಯುತ ,ಪ್ರಗತಿಯುತ,ಐಕ್ಯಯುತ ಭವ್ಯಭಾರತವನ್ನು ನಿರ್ಮಿಸೋಣ.(ಎಲ್ಲರೂ ಭೋಲೋ ಭಾರತಮಾತಾಕಿ ಜೈ)
ವ೦ದೇ ಮಾತರ೦ ಸುಜಲಾ೦ ಸುಫಲಾ೦
ಮಲಯಜಶೀತಲಾ೦ ವ೦ದೇ ಮಾತರ೦...  ಜೈಹಿ೦ದ್
------------------------------------------------------------

No comments:

Post a Comment