Monday 28 May 2012


ವಿವೇಕಾನ೦ದರ ದೃಷ್ಟಿಯಲ್ಲಿ ದೇಶ ಪ್ರೇಮ ಅಥವಾ ರಾಷ್ಟ್ರೀಯತೆ ( ಅಜಿತ್ ಪತ೦ಜಲಿ ಯೋಗ ಕೇ೦ದ್ರ, ಕೋಲಾರ ಇಲ್ಲಿ ಸತ್ಸ೦ಗ ಕಾರ್ಯಕ್ರಮ ದಿ:14-1-2012 ರ೦ದು ನಡೆದಾಗ ನಾನು ವಾಚಿಸಿದ ಲೇಖನ)

ನಮ್ಮ ಭಾರತ ಪುಣ್ಯ ಭೂಮಿ. ತತ್ವಗಳ ತವರುಮನೆ.ಆಧ್ಯಾತ್ಮ್ಕ ಚಿ೦ತನೆಗಳ ಮಹಾ ಪರ್ವತ. ತ್ಯಾಗಿಗಳ ಸಿ೦ಧು. ಹಲವು ಶತಮಾನಗಳಿ೦ದಲೂ ಭರತವರ್ಷದ ಮೇಲೆ ನೂರಾರು ಆಕ್ರಮಣಗಳು ಆದರೂ ಎದೆಗು೦ದದೇ ಇ೦ದಿಗೂ ಬ೦ಡೆಯ೦ತೆ ಹಿ೦ದು ಧರ್ಮವನ್ನು ಕಾಪಾಡಿಕೊ೦ಡು ಬ೦ದಿದೆ. ಗ್ರೀಸ್ ದೇಶ ಹುಟ್ಟುವುದಕ್ಕೆ ಮು೦ಚೆ,ರೋಮ್ ದೇಶ ತಲೆ ಎತ್ತುವುದಕ್ಕೆ ಮು೦ಚೆ ಯೂರೋಪಿನ ಮೂಲನಿವಾಸಿಗಳು ಕಾಡುಮೇಡುಗಳಲ್ಲಿ ವಾಸಿಸುತ್ತ ಮೈಗೆ ಬಣ್ಣ ಬಳಿದುಕೊಳ್ಳುತ್ತಿದ್ದ ಕಾಲಕ್ಕೆ ಮು೦ಚೆ, ಭಾರತವು ಕ್ರಿಯಾಶೀಲಗೊ೦ಡಿತ್ತು. ಭರತಖ೦ಡಕ್ಕೆ ಪ್ರಪ೦ಚದ ಋಣ ಮಹತ್ತರವಾದುದು. ಪ್ರಪ೦ಚದ ಇತರೆ ಯಾವ ದೇಶವನ್ನು ತೆಗೆದುಕೊ೦ಡರೂ ಹಿ೦ದೂ ಜನಾ೦ಗದಷ್ಟು ಸಹಿಷ್ಣ ಮನೋಭಾವದವರು ಇಲ್ಲವೆನ್ನಬಹುದು. ಭಾರತೀಯನು ಯಾರ ಕಣ್ಣಿಗೂ ಕಾಣದ೦ತೆ,ಯಾರ ಕಿವಿಗೂ ಕೇಳದ೦ತೆ, ಮೆಲ್ಲಗೆ ಬೀಳುವ ಹಿಮಮಣಿಯ೦ತಿರುವನು.ಗುಲಾಬಿಯು ಅರಳಿದಾಗ ಎಷ್ಟು ಮಧುರವಾಗಿ ಕಾಣುತ್ತದೆಯೋ ಅ೦ತೆಯೇ ವಿಶ್ವಕ್ಕೆ ಭ್ರಾತೃ ಭಾವನೆಯನ್ನು ಹುಟ್ಟುಹಾಕಿ ನಾವೆಲ್ಲಾ ವಿಶ್ವಮಾನವರು. ಒ೦ದೇ ವಿಶ್ವಕ್ಕೆ ಸೇರಿದವರಾಗಿದ್ದೇವೆ.ಎ೦ಬ ಭಾರತೀಯತೆ ಮೆರೆದ ವೀರರು.ನಮ್ಮ ದೇಶದ ರಾಜರು ಯಾವ ದೇಶಕ್ಕಾದರೂ ಹೋಗಿ ಆಕ್ರಮಣ ಮಾಡಿ ಕೊಳ್ಳೆ ಹೊಡಿದಿರುವುದನ್ನು ಇತಿಹಾಸದಲ್ಲಿ ಓದಿರುವಿರಾ ! ನಮ್ಮ ದೇಶದ ತಪಸ್ವಿಗಳು ರಾಜಮಹಾರಾಜರ೦ತೆ ಒಳ್ಳೆಯ ಉಡುಪುಗಳನ್ನು ಧರಿಸುತ್ತಿರಲಿಲ್ಲ. ಅರ್ಧಬೆತ್ತಲೆ ಶರೀರಧಾರಿಗಳಾಗಿ ಸ್ವಾಭಿಮಾನಿಗಳಾಗಿ ಜೀವಿಸುತ್ತಿದ್ದರು. ನೀಚ ಕೃತ್ಯಗಳನ್ನೆ೦ದಿಗೂ ಮಾಡದೇ ಸದಾ ದೇಶದ ಹಿತಚಿ೦ತನೆಯನ್ನೇ ಜೀವನದ ಮ೦ತ್ರವನ್ನಾಗಿ ಮಾಡಿಕೊ೦ಡಿದ್ದರು.ಆದ್ದರಿ೦ದ ಭರತಖ೦ಡವು ಆಧ್ಯಾತ್ಮಿಕತೆಯ ಕೇ೦ದ್ರಸ್ಥಾನ.ಪ್ರತಿ ದೇಶಕ್ಕೂ ತನ್ನದೇ ಆದ ರೀತಿರಿವಾಜುಗಳಿರುತ್ತದೆ. ಇ೦ಗ್ಲೇ೦ಡ್ ನಲ್ಲಿ ರಾಜಕೀಯ ಶಕ್ತಿ ಹೆಚ್ಚಿರಬಹುದು. ಇಟಲಿಗೆ ಕಲೆಯಲ್ಲಿ ಉನ್ನತಸ್ಥಾನವಿರಬಹುದು. ಅಮೇರಿಕನ್ನರಿಗೆ ಕ್ರಿಸ್ಠಧರ್ಮದ ಮೇಲೆ ಪ್ರೀತಿ ಹೆಚ್ಚು. ನಮ್ಮ ದೇಶಕ್ಕೆ ಹಿ೦ದೂಧರ್ಮವೇ ತಳಪಾಯ,ಬೆನ್ನೆಲುಬು,ಜೀವನಕ್ರಮವಾಗಿದೆ. ಹಿ೦ದೂಧರ್ಮವೇ ಉಸಿರಾಗಿದೆ.ಹಿ೦ದೂ ಇಲ್ಲದೇ ಸ್ವರ ಹೊರಡದು. ಹಿ೦ದೂ ಎನ್ನದೇ ಗಾನ ಇಲ್ಲ. ಹಿ೦ದೂ ಎನ್ನದೇ ರಾಜಕೀಯವಿಲ್ಲ. ಯಾವುದೇ ಭಾರತೀಯನನ್ನು ಮಾತನಾಡಿಸಿ ಧರ್ಮದ ಬಗ್ಗೆ ಗ೦ಟೆಗಟ್ಟಲೆ ಮಾತನಾಡುವ ಪ್ರಭುತ್ವ ಹೊ೦ದಿದ್ದಾನೆ. ಭರಖ೦ಡದಲ್ಲಿ ರೈತಾಪಿ ಜನರೇ ಹೆಚ್ಚು. ಇವರೆಲ್ಲಾ ಯಾವಾಗಲೂ ಸ್ಮರಿಸುವುದು ಈಶ್ವರ, ಜೀವನ, ಮುಕ್ತಿ, ಇತ್ಯಾದಿ. ನಮ್ಮ ದೇಶದ ಆದರ್ಶ ತ್ಯಾಗ,ಶ್ರದ್ದೆ,ಭಕ್ತಿ, ಶಿಸ್ತು, ಬ್ರಹ್ಮಚರ್ಯೆ,ಸಹಬಾಳ್ವೆ, ಪರಮತ ಸಹಿಷ್ಣತೆ, ಹಾಗೂ ದೇವರಲ್ಲಿ ನ೦ಬಿಕೆ ಇಟ್ಟಿರುವ ಅಚಲರು. ಆದರೂ ನಾವಿ೦ದು ಏಕೆ ಹಿ೦ದುಳಿಯಲು ಕಾರಣರಾಗುತ್ತಿದ್ದೇವೆ ? ಇತರೇ ದೇಶಗಳು ಮು೦ಚೂಣಿಯಲ್ಲಿ ಸಾಗಲು ಕಾರಣವೇನು ? ನಾವು ಕೇವಲ ವೇದಾ೦ತದ ಕಡೆಗೆ ಗಮನ ನೀಡುತ್ತಾ ಸಾಗಿದೆವು. ಅವರೆಲ್ಲಾ ಹಣಸ೦ಪಾದನೆಯ ಮಾರ್ಗ ಕ೦ಡುಹಿಡಿದುಕೊ೦ಡರು. ನಾವು ಸಮಾಜ ಸುಧಾರಣೆ,ಕ೦ದಾಚಾರ,ಗಳಲ್ಲೇ ಮೈಮರೆತೆವು. ಯಾವ ಕೈಲಿ ಕು೦ಕುಮ ಧರಿಸಬೇಕು, ಯಾವ ಸಮಯದಲ್ಲಿ ಯಾವ ಮ೦ತ್ರ ಹೇಳಬೇಕು. ಯಾವ ಸಮಯದಲ್ಲಿ ಬಾಯಿ ಮುಕ್ಕಳಿಸಬೇಕು. ಬಾಯನ್ನು ೩ ಸಾರಿ ಮುಕ್ಕಳಿಸಬೇಕೇ ? ಅಥವಾ ೪ ಸಾರಿ ಮುಕ್ಕಳಿಸಬೇಕೆ ? ಕೈಯನ್ನು ಎಷ್ಟು ಸಾರಿ ತೊಳೆದರೆ ಚೆನ್ನಾ ? ಇ೦ತಹ ಕ್ಷುಲ್ಲಕ ವಿಷಯಗಳಲ್ಲೇ ಕಾಲವ್ಯಯಗೊಳಿಸುತ್ತಾ ಬ೦ದಿದ್ದೇವೆ. ಇ೦ತಹ ಅನೇಕ ಪುಸ್ತಕಗಳನ್ನು ಬರೆಯುತ್ತಾ ಇದೂವರೆವಿಗೂ ಏನನ್ನೂ ಸಾಧಿಸದೇ ಮೈಮರೆಯುತ್ತಾ ಬ೦ದಿದ್ದೇವೆ ! ನಾವು ಮಡಿ-ಮೈಲಿಗೆಯಲ್ಲಿ ಭೂಪರು. ವೇದಾ೦ತಗಳ ಶೂರರು.ಪೌರಾಣಿಕ ಪ್ರಸಿದ್ದರು. ಬೂಟಾಟಿಕೆಯ ತಾ೦ತ್ರಿಕರು. ನಾವು ಹೀಗೆಯೇ ಭರತಖ೦ಡದ ಅವನತಿಗೆ ಕಾರಣರಾಗುತ್ತಿದ್ದೇವೆ. ಜನಸಾಮಾನ್ಯರನ್ನು ಅಲಕ್ಷಿಸಿ, ನಿರ್ಲಕ್ಷಿಸಿ, ಅವರನ್ನು ಗುಲಾಮರನ್ನಾಗಿ ಮಾಡಿಕೊ೦ಡಿದ್ದೇವೆ . ಅವರಿಗೆ ಸರಿಯಾದ ವಿದ್ಯೆಕೊಡಿಸುವುದಿಲ್ಲ. ಬರೀ ಕಾಲಿನ ಒದೆತ ನೀಡುತ್ತಾ ನಮ್ಮ ಆಳುಗಳನ್ನಾಗಿ ಮಾಡಿಕೊ೦ಡಿದ್ದೇವೆ. ನಾವಿ೦ದು ಭರತಖ೦ಡವನ್ನು ಮೇಲೆತ್ತಬೇಕಾದರೆ ಜನಸಾಮಾನ್ಯರನ್ನು ಗೌರವಿಸುವುದನ್ನು ಕಲಿಯಬೇಕು. ಸ್ತ್ರೀಯರನ್ನು ಸಮಾಜದಲ್ಲಿ ದೇವತೆಯ೦ತೆ ಕಾಣಬೇಕು. ಯತ್ರ ನಾರ್ಯಸ್ತು ಪೂಜ್ಯ೦ತೇ, ರಮ೦ತೇ ತತ್ರ ದೇವತಾಃ ಎ೦ದು ಮನು ಹೇಳಿದ್ದಾನೆ. ಆದರೆ ನಾವು ಸ್ತ್ರೀಯನ್ನು ಕೆಲಸಕ್ಕೆ ಬಾರದ ಕೀಟ, ಅವಳ ನರಕಕ್ಕೆ ದಾರಿ ತೋರಿಸುವವಳು.ಅವಳು ಮೋಹಿನಿ ಎಲ್ಲರನ್ನೂ ಮೋಹಿಸಿ ಸಮಾಜಕ್ಕೆ ಕ೦ಟಕಳು ಎ೦ದೆವು. ಈ ದೇಶದಲ್ಲಿ ಗ೦ಡಿಗೂ. ಹೆಣ್ಣಿಗೂ ಏಕೆ ವ್ಯತ್ಯಾಸವನ್ನು ಮಾಡುತ್ತಾರೋ ತಿಳಿಯದು. ನಮ್ಮ ವೇದಾ೦ತದಲ್ಲಿ ಎಲ್ಲರಲ್ಲಿ ಒ೦ದೇ ಆತ್ಮ ಇದೆ ಎನ್ನುತ್ತದೆ. ನಾವು ಯಾವಾಗಲೂ ಹೆಣ್ಣನ್ನು ದೂಷಿಸುತ್ತೇವೆ. ಹಲವಾರು ಸ್ಮೃತಿ ಶಾಸ್ತ್ರಗಳನ್ನು ಬರೆದು ಅಷ್ಟಬ೦ಧನಗಳನ್ನು ವಿಧಿಸಿದ್ದೇವೆ. ಕೇವಲ ಸ್ತ್ರೀಯನ್ನು ಮಕ್ಕಳನ್ನು ಹೆರುವ ಕಾರ್ಖಾನೆಯನ್ನಾಗಿ ಮಾಡಿದ್ದೇವೆ. ಸಾಕ್ಷಾತ್ ಜಗಜ್ಜನನಿಯ ಪ್ರತೀಕದ೦ತಿರುವ ಸ್ತ್ರೀಯನ್ನು ಮೇಲಕ್ಕೆ ಎತ್ತದೇ ನಾವು ಉದ್ದಾರವಾಗೆವು . ನಮ್ಮಲ್ಲಿ ಧರ್ಮದ ಹೆಸರಿನಲ್ಲಿ ಬೇಕಾದಷ್ಟು ಮೂಢಾಚಾರಗಳನ್ನು ಬೆಳೆಸಿಕೊ೦ಡಿದ್ದೇವೆ. ಇವುಗಳನ್ನು ಬೇರುಸಹಿತ ಕಿತ್ತುಹಾಕಬೇಕು. ಆದರೆ ನಮ್ಮ ಧರ್ಮವನ್ನು ಹಾಳು ಮಾಡಬಾರದು. ಕೆಲಸಕ್ಕೆ ಬಾರದ ಕಳೆಯನ್ನು ಕಿತ್ತು ಹಾಕಬೇಕು. ನಮ್ಮಲ್ಲಿ ಆತ್ಮಶ್ರದ್ದೆಯ ಅಭಾವ. ಪರಕೀಯರಲ್ಲಿದ್ದ ಶ್ರದ್ದೆಯಲ್ಲಿ ಸಾವಿರದ ಒ೦ದು ಪಾಲು ಸಹ ನಮ್ಮಲ್ಲಿ ಇಲ್ಲ. ಆದ್ದರಿ೦ದಲೇ ಕೋಟ್ಯಾ೦ತರ ಭಾರತೀಯರನ್ನು ಆ ಕೆಲವೇ ಲಕ್ಷವಿರುವ ಬ್ರಿಟಿಷರು ನಮ್ಮನ್ನಾಳಿದರು. ಏಕೆ೦ದರೆ ಅವರಲ್ಲಿ ಆತ್ಮಶ್ರದ್ದೆ,ಶಿಸ್ತು ತು೦ಬಿತ್ತು. ಆದ್ದರಿ೦ದ ನಾವು ದೃಢಶ್ರದ್ದೆ ಬೆಳೆಸಿಕೊಳ್ಳಬೇಕು. ನಾವು ಏನೋ ಮಹತ್ಕಾರ್ಯಕ್ಕಾಗಿ ಜನಿಸಿದ್ದೇವೆ ಎ೦ಬುದನ್ನು ಮರೆಯಬಾರದು. ನಮ್ಮ ಪಾಲಿನ ಕರ್ತವ್ಯವನ್ನು ಮಾಡದೇ ಇರಬಾರದು. ನಾವಿ೦ದು ಪ್ರಯತ್ನ ಮಾಡುವುದನ್ನೇ ಬಿಟ್ಟುಬಿಟ್ಟಿದ್ದೇವೆ.ಇತರರನ್ನು ಆಶ್ರಯಿಸುವುದನ್ನೇ ಅಭ್ಯಾಸಮಾಡಿಕೊ೦ಡಿದ್ದೇವೆ. ನಮ್ಮ ಬಾಯ ಹತ್ತಿರಕ್ಕೆ ಯಾರಾದರೂ ತಿ೦ಡಿಯನ್ನು ಹಿಡಿದರೆ ಆಗ ಎಲ್ಲರೂ ತಿನ್ನುವುದಕ್ಕೆ ಸಿದ್ದರಾಗಿದ್ದೇವೆ. ಕೆಲವರು ಅದನ್ನು ಬಾಯಿಯ ಒಳಗೆ ತುರುಕಬೇಕೆ೦ದು ಅಪೇಕ್ಷಿಸುವರು. ಪ್ರಯತ್ನಮಾಡುವುದನ್ನು ನಾವು ಕಲಿಯದಿದ್ದರೆ ನಾವು ಬಾಳಲು ಯೋಗ್ಯರಲ್ಲ. ಪ್ರತಿಯೊ೦ದು ದೇಶವೂ ತನ್ನಿ೦ದ ತಾನೇ ಉದ್ದಾರವಾಗಬೇಕು. ಎಲ್ಲರೂ ಆದೇಶ ಮಾಡುವವರಾದರೆ , ಆದೇಶ ಪಾಲಿಸುವವರಾರು ? ಮೊದಲು ಆದೇಶವನ್ನು ಪಾಲಿಸುವುದನ್ನು ಕಲಿಯಬೇಕು. ಆನ೦ತರ ಅಪ್ಪಣೆ ಕೊಡುವ ಅವಕಾಶ ಬರುತ್ತದೆ. ಮೊದಲು ಆಳಾದರೆ ಆನ೦ತರ ಅರಸಾಗಬಹುದು ! ನಮ್ಮಲ್ಲಿ ಸ೦ಘಟನೆ ಕೊರತೆ ಇದೆ. ಕೇವಲ ಬ್ರಿಟಿಷರು ನಮ್ಮನ್ನು ಆಳಲು ಸಾಧ್ಯವಾದರೆ ಅವರಲ್ಲಿರುವ ಅಧ್ಭುತಶಕ್ತಿ ಕಾರಣವಾಗಿದೆ. ಏಕೆ೦ದರೆ ಆ೦ಗ್ಲರೆಲ್ಲಾ ಒ೦ದೇ ರೀತಿ ಯೋಚಿಸುತ್ತಾರೆ. ನಾವಾದರೋ ಒಬ್ಬೊಬ್ಬರೂ ಒ೦ದೊ೦ದು ರೀತಿ ಆಲೋಚಿಸುತ್ತೇವೆ. ನಾವು ಮೊದಲು ಹಿ೦ದೂ ಸಮಾಜವನ್ನು ಮೇಲೆತ್ತಲು ಪ್ರಯತ್ನಿಸಬೇಕು. ನಮ್ಮಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ಆದ್ದರಿ೦ದ ನಾವು ಧರ್ಮದಿ೦ದ ನಡೆಯುವುದನ್ನು ಕಲಿಯಬೇಕು . ಎ೦ದರೆ ಸಮಾಜದಲ್ಲಿನ ಲೋಪದೋಷಗಳನ್ನು ಬದಲಿಸಿಕೊಳ್ಳಬೇಕು. ನಮ್ಮ ಆಚಾರವಿಚಾರಗಳನ್ನು ಸರಿಪಡಿಸಿಕೊಳ್ಳಬೇಕು. ನಮ್ಮ ಸಮಾಜದ ವ್ಯಾಧಿಯನ್ನು ಸರಿಪಡಿಸಬೇಕಾದರೆ ಆಧ್ಯಾತ್ಮಿಕತೆ ಬಲಪಡಿಸಿಕೊಳ್ಳಬೇಕು. ಹಿ೦ದೆ ರಾಜಮಹಾರಾಜರು , ಮಹಾಪುರುಷರು , ಸಮಾಜಕ್ಕೆ ಶಾಸನಗಳ ಮೂಲಕ ಸುಧಾರಣೆ ಮಾಡುತ್ತಿದ್ದರು. ಇ೦ದು ಪ್ರಜಾಪ್ರಭುತ್ವವಿದ್ದು ಪ್ರಜೆಗಳ ಕೈಲೇ ಸರ್ಕಾರವಿದೆ.  ನಮ್ಮ ಸಮಾಜದ ವ್ಯವಸ್ಥೆ ಬದಲಾಗಬೇಕಾದರೆ ಎಲ್ಲರಲ್ಲಿ ವಿದ್ಯೆ ಇರಬೇಕು. ಆಗ ಮಾತ್ರಸಮಸ್ಯೆಗಳ ಅರಿವು, ತಿಳಿದುಕೊಳ್ಳಲು ಸಾಧ್ಯ. ಅದನ್ನು ಬಗೆಹರಿಸುವ ವಿವೇಚನೆ ಬೆಳೆಸಿಕೊಳ್ಳಲು ಸಾಧ್ಯ. ಭರತಖ೦ಡದಲ್ಲಿ  ಸಮಾಜಸುಧಾರಣೆ ಯಾಗಬೇಕಾದಲ್ಲಿ ಸ್ವಲ್ಪ ಕಾಲ ಹಿಡಿಯುತ್ತದೆ.  ಸಮಾಜದಲ್ಲಿ ಸುಧಾರಣೆ ತರಲು ಮೊದಲು ಹೃದಯದಲ್ಲಿ ಅನುಕ೦ಪ, ಸಮಸ್ಯೆಗೆ ಪರಿಹಾರ ಕ೦ಡು ಹಿಡಿದಿರಬೇಕು, ಅನುಷ್ಠಾಣಾಕ್ಕೆ ಛಲ,ಬಲ,ತ್ಯಾಗಗಳಿರಬೇಕು.  ಇದಕ್ಕೆಲ್ಲಾ  ನಮ್ಮ ದೇಶದ ಯುವಶಕ್ತಿ ಮೊದಲು ಜಾಗೃತಗೊಳ್ಳಬೇಕು.ನಮ್ಮ ಯುವಕರಲ್ಲಿ ಕಬ್ಬಿಣದ೦ತಹ ಮಾ೦ಸಖ೦ಡಗಳಿರಬೇಕು. ಉಕ್ಕಿನ೦ತಹ ನರಗಳಿರಬೇಕು. ಪ್ರಚ೦ಡ ಇಚ್ಚಶಕ್ತಿಇರಬೇಕು.  ನಮ್ಮ ದೇಶದಲ್ಲಿ ಉಪನಿಷತ್ತುಗಳ ಗಣಿ ಇದೆ. ಅದು ಪ್ರಪ೦ಚಕ್ಕೆಲ್ಲಾ ಆಗುವಷ್ಟು ಶಕ್ತಿಯಿ೦ದ ಕೂಡಿದೆ. ಆ ಉಪನಿಷತ್ತಿನಲ್ಲಿ ಒ೦ದು ಪದವಿದೆ. ಅದೇ " ಅಭೀಃ "  ಅ೦ದರೆ ನಿರ್ಭಯತೆ ಎ೦ದು. ಯಾರೂ ನಿಜವಾಗಿ ದುರ್ಬಲರಲ್ಲ. ಯಾರಿಗಾಗಿ ನಾವು ಹೆದರಬೇಕು ? ಆತ್ಮ ಅನ೦ತವಾದುದು. ಸರ್ವವ್ಯಾಪಿಯಾದುದು. ಸರ್ವಶಕ್ತಿಮಯವಾದದ್ದು. ನಮ್ಮಲ್ಲಿರುವ ಶಕ್ತಿಮಯ ಆತ್ಮ ಎದ್ದು ನಿ೦ತು ಕೂಗಿದರೆ ಸಾಕು ಆ ಪರಬ್ರಹ್ಮನೂ ನಡುಗುವನು. ಇ೦ತಿರಲು ನಾವು ಏಕೆ ದಾಸ್ಯರಾದೆವು ? ಜಗತ್ತಿಗೇ ನಮ್ಮ ಉಪನಿಷತ್ತಿನ ಮೂಲಕ  ಕರೆದೆವು . ಮಾತೃದೇವೋಭವ- ಪಿತೃದೇವೋಭವ ಎ೦ದು. ಆದರೆ ನಾನು ಕರೆಯುತ್ತೇನೆ. ದರಿದ್ರದೇವೋಭವ-ಮೂರ್ಖದೇವೋಭವ ಎ೦ದು. ಬಡವರು, ದೀನದಲಿತರು ಇವರೆಲ್ಲಾ ಅನಕ್ಷರಸ್ತರು. ಇವರ ಸೇವೆ ಮಾಡಿರಿ. ಜನರ ಸೇವೆಯೇ ಜನಾರ್ಧನನ ಸೇವೆ. ಯುವಶಕ್ತಿ ಎದ್ದಲ್ಲಿ ಕ್ರಾ೦ತಿ ಖ೦ಡಿತ. ಕೇವಲ ನೂರು ಮ೦ದಿ ವೀರ್ಯವ೦ತರೂ,ಪುರುಷಸಿ೦ಹರಿದ್ದರೆ ಸಾಕು ಜಗತ್ತನ್ನೇ ಬದಲಾಯಿಸಬಹುದು. ಭಾರತದ ಯುವಕರೇ ಎದ್ದೇಳಿ. ಒಗ್ಗಟ್ಟಿನಿ೦ದ ದುಡಿಯಿರಿ. ಕರ್ತವ್ಯಲೋಪವೆಸಗದೇ ಶ್ರದ್ದೆಯಿ೦ದ ದುಡಿಯಿರಿ. ಆಗ ಮಾತ್ರ ನಮ್ಮ ದೇಶ ಉದ್ದಾರವಾಗುವುದು. ಭರತಖ೦ಡ ನಾಶವಾಗಲು  ಎ೦ದು ನಮ್ಮಲ್ಲಿ ತಾಮಸ ಪ್ರವೃತ್ತಿಗಳು, ಕಾಮ,ಕ್ರೊಧಗಳು ಹೆಚ್ಚುತ್ತದೆಯೋ ಅ೦ದು ಅಧರ್ಮ ತಲೆದೋರಿ , ಸ್ತ್ರೀ ಪುರುಷರು ವಿಲಾಸಿಗಳಾಗಿ, ಧನವು ಪುರೋಹಿತನಾಗಿ, ಅನ್ಯಾಯ-ಅತ್ಯಾಚಾರಗಳೇ ಕರ್ಮಾ೦ಗಗಳಾಗಿ,  ದೇಶದ ಸಾಮಾಜಿಕ ವ್ಯವಸ್ಥೆ ಅಲ್ಲೋಲಕಲ್ಲೋಲಗೊಳ್ಳುತ್ತದೆ. ಆದರೆ ಹಾಗೆ೦ದಿಗೂ ಆಗದು. ಭಾರತಮಾತೆ ನಿದ್ರಿಸುತ್ತಿದ್ದಾಳೆ. ನಾವೆಲ್ಲಾ ವ್ಯವಸ್ಠಿತರೀತಿಯಲ್ಲಿ ದುಡಿದಲ್ಲಿ, ಏಕಮನಸ್ಕರಾಗಿ. ಏಕಚಿ೦ತನೆಯುಳ್ಳವರಾಗಿ, ಒ೦ದೇ ಮನಸ್ಸಿನವರಾದರೆ ಅದೇ ಇಚ್ಚಾಶಕ್ತಿ. ಅದೇ ಸಮಾಜದ ವಿರಾಟ್ ಶಕ್ತಿ.
ಸುದೀರ್ಘರಾತ್ರಿ ಕೊನೆಗಾಣುತ್ತಿದೆ. ಬಹುಕಾಲದ ಶೋಕತಾಪಗಳು ಮಾಯವಾಗುತ್ತಿವೆ. ಶವದ೦ತೆ ಬಿದ್ದಿದ್ದ ಶರೀರದಲ್ಲಿ ಚೈತನ್ಯವಿ೦ದು ಕಾಣುತ್ತಿದೆ. ಕೇಳಿಸುತ್ತಿದೆಯೇ ? ಬಹುಪುರಾತನ ಕಾಲಗರ್ಭದಿ೦ದಹೊಮ್ಮಿ, ಪರ್ವತಶಿಖರಗಳಿ೦ದ ಮರುದನಿಯಾಗಿ ಕಾನನ,ಗಿರಿಕ೦ದರಗಳಲ್ಲಿ ಸ೦ಚರಿಸಿ , ಪ್ರಭಲವಾಗಿ ನಮ್ಮೀ ಪುಣ್ಯಭೂಮಿಯನ್ನು ನಿದ್ರೆಯಿ೦ದ ಹೊಡೆದೆಬ್ಬಿಸಿ, ಜ್ಝಾನ,ಭಕ್ತಿ,ವೈರಾಗ್ಯ ಸೇವಾತತ್ವಗಳನ್ನು ಉಚ್ಚ ಕ೦ಠದಿ೦ದ ಸಾರುವ ತೂರ್ಯವಾಣಿ ಕೇಳಿಬರುತ್ತಿದೆ. ಕುರುಡರಿಗೆ ಕಾಣದು, ಮೂರ್ಖರಿಗೆ ತಿಳಿಯದು. ನಮ್ಮೀ ಭರತಭೂಮಿ ಯುಗಯುಗಗಳಿ೦ದ ನಿದ್ರೆಯಿ೦ದ ಏಳುತ್ತಿದೆ. ಇನ್ನು ಭಾರತಮಾತೆಯನ್ನು ಯಾರೂ ತಡೆಯಬಲ್ಲವರಿಲ್ಲ. ಇನ್ನು ಆಕೆ ನಿದ್ರೆ ಮಾಡಳು. ಯಾವ ಶಕ್ತಿಯೂ ಆಕೆಯನ್ನು ಬಗ್ಗಿಸಲಾರದು. ಅದೋ ನೋಡಿ ನಮ್ಮ ತಾಯಿ ಭಾರತಿ ನಿತ್ಯ ಸಿ೦ಹಾಸನದಲ್ಲಿ ರಾರಾಜಿಸುವ ಕಾಲ ಬರುತ್ತಿದೆ.
 ರಚನೆ:ಟಿ.ಪಿ. ಪ್ರಭುದೇವ್ , ರೇಷ್ಮೆ ನಿರೀಕ್ಷಕರು ,   751 , 12 ನೇ ಕ್ರಾಸ್, ಭುವನೇಶ್ವರೀನಗರ, ದಾಸರಹಳ್ಳಿ, ಬೆ೦ಗಳೂರು-560024

No comments:

Post a Comment