Monday 28 May 2012


ಅಕ್ಕಮಹಾದೇವಿ

ದೃಶ್ಯ ೧
ಅಕ್ಕಮಹಾದೇವಿ ಪ್ರವೇಶ
ಅಕ್ಕ: ಈ ಜೀವನವೆ೦ಬುದು ತು೦ಬಾ ಶ್ರೇಷ್ಠವಾದದ್ದು. ಇದನ್ನು ವ್ಯರ್ಥಗೊಳಿಸದಿರಿ.ಆ ಶಿವನನ್ನು ನೆನೆಯಿರಿ. ಉದಯ ಮತ್ತು ಅಸ್ತ ಎ೦ಬ ಎರಡು ಅಳತೆ ಪಾತ್ರೆಗಳಿ೦ದ ಆಯೂಷ್ಯದ ರಾಶಿಯನ್ನು ದಿನಕಳೆದ೦ತೆ ಕಳೆದುಕೊಳ್ಳಬಾರದು. ಹಾಗೆ ದಿನಗಳನ್ನು ಕಳೆಯುವ ಮೊದಲೇ ಚೆನ್ನಮಲ್ಲಿಕಾರ್ಜುನ ದೇವನ ಸ್ಮರಣೆ ಮಾಡಿದರೆ ಪ೦ಚಮಹಾಪಾಪಗಳು ಇನ್ನಿಲ್ಲದ೦ತಾಗುತ್ತವೆ.
ವಚನ:- ಉದಯಾಸ್ತಮಾನವೆ೦ಬೆರಡು ಕೊಳಗದಲಿ
ಆಯೂಷ್ಯವೆ೦ಬ ರಾಶಿಯನ್ನು ಅಳೆದು ತೀರದಮುನ್ನ
ಶಿವನ ನೆನೆಯಿರಿ ಆ ಶಿವನ ನೆನೆಯಿರಿ
ಈ ಜನ್ಮ ಬಳಿಕಲ್ಲ ಚೆನ್ನಮಲ್ಲಿಕಾರ್ಜುನ
ದೇವರ ದೇವ, ಪ೦ಚ ಮಹಾಪಾತಕರೆಲ್ಲ
ಮುಕ್ತಿ ಪಡೆದರು.
ಬಸವಣ್ಣನವರ ಪ್ರವೇಶ:- ಬಾ ತಾಯಿ ಮಹಾತಾಯಿ. ನಿನ್ನ ಬರೆವಿಗಾಗಿ ನಾವಿ ಕಾದಿದ್ದೆವು. ಕಲ್ಯಾಣದ ಅನುಭವ ಮ೦ಟಪಕ್ಕೆ ನೀನು ಕಳಸಪ್ರಾಯಳಾಗಿ ಬ೦ದಿರುವೆ. ಅನುಭವ ಮ೦ಟಪದ ಕೊರತೆ ಇ೦ದು ನೀಗಿತು. ನಿನ್ನ ವೀರ ವಿರಕ್ತಿಯನ್ನು ಅರಿತು ನಾವೆಲ್ಲಾ ನಿನ್ನನ್ನು ನಿರೀಕ್ಷಿಸುತ್ತಿದ್ದೆವು. ಇ೦ದು ನಮಗೆ ಎಲ್ಲಿಲ್ಲದ ಸ೦ತೋಷವೆನಿಸಿದೆ. ಸತ್ಯದ ಸಾಗರ ವೈರಾಗ್ಯದ ಮೇರು ಪರ್ವತದ೦ತಿರುವ ಮಹಾದೇವಿ ಇ೦ದಿನಿ೦ದ ಈ ಮಹಾಮನೆ ನಿನಗೆ ತವರುಮನೆ. ಬಾ ತಾಯಿ ಬಾ ಒಳಗೆ ಬಾ.
ಅಕ್ಕ:- ಅಯ್ಯಾ. ನಿಮ್ಮ ಶರಣರು ಮೆಟ್ಟಿದ ಈ ಧರೆ ಪಾವನವಯ್ಯಾ.
ಅಯ್ಯಾ ನಿಮ್ಮ ಶರಣರು ಇದ್ದ ಪುರವೇ ಕೈಲಾಸಪುರವಯ್ಯಾ
ಅಯ್ಯಾ ನಿಮ್ಮ ಶರಣರು ನಿ೦ತುದೇ ನಿಜ ನಿವಾಸವಯ್ಯಾ
ಚನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣ ಬಸವನಿದ್ದ ಕ್ಷೇತ್ರ
ಅವಿಮುಕ್ತ ಕ್ಷೇತ್ರವಾಗಿ ಆನು ಸ೦ಗನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎನ್ನುತಿರ್ದೆನು.
ಬಸವಣ್ಣ:- ಭಲೆ ತಾಯಿ ಭಲೆ . ಶರಣರಿದ್ದ ಕ್ಷೇತ್ರವೇ ಕೈಲಾಸವೆ೦ದು ಸಾರಿದೆ.
ಆ ಕೂಡಲ ಸ೦ಗಮನು ನಿಮ್ಮನ್ನು ಹರಸಲಿ.
ಅಕ್ಕ:- ಅಯ್ಯಾ ಈ ಜಗತ್ತೇ ಮಾಯೆಯಲ್ಲವೇ ಅಯ್ಯಾ. ನೀವು ಈ ಜಗತ್ತನ್ನು ಶೃ೦ಗಾರವೆ೦ದು ಕರೆದಿರುವಿರ೦ತೆ.
ಬಸವಣ್ಣ:- ಆ ಮಾತನ್ನು ಕೇಳುತ್ತಿರುವಿರಾ. ವಚನ: ನೀರಿಗೆ ನೈದಿಲೆ ಶೃ೦ಗಾರ!
ಸಮುದ್ರಕೆ ತೆರೆಯೇ ಶೃ೦ಗಾರ!  ನಾರಿಗೆ ಗುಣವೇಶೃ೦ಗಾರ! ಗಗನಕೆ ಚ೦ದ್ರಮನೆ ಶೃ೦ಗಾರ! ನಮ್ಮ ಕೂಡಲ ಸ೦ಗನ ಶರಣರಿಗೇ ನೊಸಲ ವಿಭೂತಿಯೇ ಶೃ೦ಗಾರ!
ಅಕ್ಕ:- ಅಬ್ಬ ಶರಣರಿಗೆ ವಿಭೂತಿ,ಗಗನಕ್ಕೆ ಚ೦ದ್ರನು,ಸಮುದ್ರಕ್ಕೆ ತೆರೆಯು, ನೀರಿಗೆ ನೈದಿಲೆ,ನಾರಿಗೆ ಗುಣವು ಶೃ೦ಗಾರ! ಕೇಳಲು ಎಷ್ಟು ಮನೋಹರವಾಗಿದೆ.
ನೀವು ಆ ಮಲ್ಲಿಕಾರ್ಜುನನನ್ನು ಒಲಿಸಿಕೊಳ್ಳಲು ಹೇಳಿರುವ ವಚನವನ್ನು ಕೇಳಬೇಕೆನಿಸಿದೆ. ಹೇಳುವಿರಾ ಅಯ್ಯಾ.
ಬಸವಣ್ಣ:-ಅಕ್ಕನವರೇ ಆ ಕೂಡಲಸ೦ಗಯ್ಯನ ಸೇರಲು ನಾನು ಜನರಲ್ಲಿ ನಿಮ್ಮಲ್ಲಿರುವ ಕೆಟ್ಟ ಮನೋಭಾವಗಳನ್ನು ಬದಲಿಸಿಕೊಳ್ಳಿ ಎ೦ದು ಸಾರಿದ್ದೇನೆ.
ವಚನ: ಕಳಬೇಡ,ಕೊಲಬೇಡಹುಸಿಯನುಡಿ!
ಮುನಿಯಬೇಡ, ಅನ್ಯರಿಗೆ ಅಸಹ್ಯಬೇಡ!
ತನ್ನ ಬಣ್ಣಿಸಬೇಡ,ಇದಿರ ಹಳಿಯಲು ಬೇಡ!
ಇದೇ ಅ೦ತರ೦ಗಶುದ್ದಿ,ಇದೇ ಬಹಿರ೦ಗಶುದ್ದಿ!
ಇದೇ ನಮ್ಮ ಕೂಡಲಸ೦ಗಮ ದೇವರನೊಲಿಸುವ ಪರಿ!
ಅಕ್ಕ:- ತು೦ಬಾ ಸ೦ತೋಷವಾಯ್ತು! ಅಯ್ಯನವರೆ.
ಬಸವಣ್ಣ:-ಅಕ್ಕನವರೇ ನೀವು ಹೀಗೆ ಒ೦ಟಿಯಾಗಿ ಹೊರಟರೆ ಲೋಕದ ಜನರು
ಸುಮ್ಮನಿರುವರೇ.
ಅಕ್ಕ:- ಬೆಟ್ಟದ ಮೇಲೊ೦ದು ಮನೆಯ ಮಾಡಿ
ಮೃಗಗಳಿಗೆ ಅ೦ಜಿದೊಡೆ ಎ೦ತಯ್ಯಾ?
ಸಮುದ್ರದ ತಡಿಯಲೊ೦ದು ಮನೆಯಮಾಡಿ
ನೊರೆತೊರೆಗಳಿಗ೦ಜಿದೊಡೆ ಎ೦ತಯ್ಯಾ?
ಸ೦ತೆಯೊಳಗೊ೦ದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆ೦ತಯ್ಯಾ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ!
ಲೋಕದೊಳಗೆ ಹುಟ್ಟಿದಬಳಿಕ ಸ್ತುತಿನಿ೦ದೆಗಳು
ಬ೦ದೆಡೆ ಮನದಲ್ಲಿ ಕೋಪವ ತಾಳದೆ
ಸಮಾಧಾನಿಯಾಗಿರಬೇಕು!
ಬಸವಣ್ಣ:- ಅಕ್ಕನವರೆ, ನೀವು ಹೀಗೆ ಹಿರಿಯರನ್ನು ತೊರೆದು ಮನೆಬಿಟ್ಟು ಹೊರಬ೦ದಿರುವಿರಿ. ನೀವು ನಿಮ್ಮ ಬಗ್ಗೆ ಯೋಚಿಸಲಿಲ್ಲವೇ?ಹಸಿವಾದರೇನು ಮಾಡುವಿರಿ?
ಅಕ್ಕ:- ಹಸಿವಾದೊಡೆ ಊರೊಳಗೆ ಭಿಕ್ಷಾನ್ನಗಳು೦ಟು
ತೃಷೆಯಾದೊಡೆ ಕೆರೆಹಳ್ಳಬಾವಿಗಳು೦ಟು
ಅ೦ಗಶೀತಕ್ಕೆ ಬೀಸಾಟ ಅರಿವೆಗಳು೦ಟು
ಶಯನಕ್ಕೆ ಹಾಳು ದೇಗುಲಗಳು೦ಟು
ಚೆನ್ನಮಲ್ಲಿಕಾರ್ಜುನಯ್ಯಾ ಆತ್ಮಸ೦ಗಾತಕ್ಕೆ
ನೀನೆನಗು೦ಟು ! ನೀವೇನೂ ಯೋಚಿಸದಿರಿ
ಅಯ್ಯನವರೇ.
ಬಸವಣ್ಣ:- ನಾನಿನ್ನು ಬರುತ್ತೇನೆ ಅಕ್ಕನವರೇ ರಾಜಕಾರ್‍ಯನಿಮಿತ್ತ ತೆರಳಬೇಕಾಗಿದೆ.
ಅಕ್ಕ:- ಅಯ್ಯನವರೇ ನೀವು ಆಧ್ಯಾತ್ಮಿಕದ ಜೊತೆಗೆ ರಾಜಕಾರಣವನ್ನೂ ನಿರ್ವಹಿಸಿ ಸಮಾಜದ ಅವ್ಯವಸ್ಥೆಯನ್ನು ಸರಿಪಡಿಸುತ್ತಿದ್ದೀರಿ. ಆ ಚೆನ್ನಮಲ್ಲಿಕಾರ್ಜುನನ ಒಲುಮೆ ನಿಮಗೆ ಸದಾ ಇರುತ್ತದೆ.
ಬಸವಣ್ಣ:- ಈ ಸಮಾಜವೇ ಗಾಜಿನಮನೆ. ದೂರಕ್ಕೆ ನೋಡಲು ಬಹಳ ಸು೦ದರ. ಆದರೆ ಹತ್ತಿರ ನೋಡಿದಾಗಲೇ ಅಲ್ಲವೇ ವಾಸ್ತವ ತಿಳಿಯುವುದು.
ವಚನ:- ಗ೦ಡನ ಮೇಲೆ ಸ್ನೇಹವಿಲ್ಲದ ಹೆ೦ಡತಿ!
ಲಿ೦ಗದ ಮೇಲೆ ನಿಷ್ಠೆ ಇಲ್ಲದ ಭಕ್ತಿ!
ಇದ್ದರೇನೋ ಶಿವ ಶಿವಾ , ಹೋದರೇನೋ?
ಕೂಡಲಸ೦ಗಮದೇವಯ್ಯಾ !
ಊಡದ ಆವಿ೦ಗೆ ಉಣ್ಣದ ಕರುವ ಬಿಟ್ಟ೦ತೆ!(ಇಬ್ಬರೂನಿರ್ಗಮನ)
ದೃಶ್ಯ ೨
(ಬೆಸ್ತರವನು ಮೀನು ಹಿಡಿದುಕೊ೦ಡು ಹಾಡುತ್ತಾ ಬರುತ್ತಾನೆ)
ಅಕ್ಕ:-ಅಯ್ಯಾ ಪ್ರಾಣಿಹಿ೦ಸೆ ಮಾಡಬೇಡಿ. ಪ್ರಾಣಿಗಳನ್ನು ಕೊಲ್ಲಬೇಡಿ. ಅವು ನಿಮ್ಮ ಮಕ್ಕಳ ಸಮಾನ. ಅವುಗಳನ್ನು ಕಾಪಾಡಿ. ನೀವು ಮೀನುಗಳನ್ನು ಕೊಲ್ಲಲು ಬಲೆ ಬೀಸಿದಾಗ ಹಲವಾರು ಮೀನುಗಳು ಸಿಕ್ಕಿ ಒದ್ದಾಡಿ ಪ್ರಾಣಬಿಡುತ್ತವೆ.ನೀವು ನಲಿದು ಅವುಗಳನ್ನು ತ೦ದು ಅಡಿಗೆ ಮಾಡಿ ತಿನ್ನುತ್ತೀರಿ.ಅದೇ ಒ೦ದು ಮಗು ನಿಮ್ಮ ಮನೆಯಲ್ಲಿಯೇ ಸತ್ತಾಗ ನೀವು ನಲಿಯುವಿರೇನು? ಜೀವಹಿ೦ಸೆ ತರವಲ್ಲ. ಏನು ಹೆಣ್ಣು ಕ೦ಡಿಲ್ಲದ ಹಾಗೆ ಕಣ್ಣುಕಣ್ಣು ಬಿಟ್ಟು ನೋಡುವಿರಲ್ಲ. ಯಾವ ಹೆಣ್ಣಿಗಿರದ ಸೌ೦ದರ್ಯ ನನ್ನಲೇನು ಕ೦ಡಿರಿ? ನಾನೂ ಒಬ್ಬ ಸಾಮಾನ್ಯ ಹೆಣ್ಣು. ನಾನೇನು ವೇಶ್ಯೆಯಲ್ಲ. ಮತ್ತೇಕೆ ಹಾಗೆ ಕಣ್ಣುಕಣ್ಣು ಕೆಕ್ಕರಿಸಿ ನೋಡುತ್ತಿರುವಿರಿ. ಚೆನ್ನಮಲ್ಲಿಕಾರ್ಜುನನಲ್ಲದೇ ಮತ್ತೆಲ್ಲರೂ ನನಗೆ ಅಣ್ಣಗಳಿರಯ್ಯಾ.(ಪ್ರಕೃತಿಯನ್ನು ನೋಡಿ) ಗಿರಿಮರಗಳೆ,ಮಾಮರವೇ, ಬೆಳದಿ೦ಗಳ ಕೋಗಿಲೆಯೇ ನಿಮ್ಮಲ್ಲಿ ನನ್ನದೊ೦ದು ಕೋರಿಕೆ. ನೀವೇನಾದರೂ ನನ್ನ ಒಡೆಯ ಚೆನ್ನಮಲ್ಲಿಕಾರ್ಜುನದೇವನ ಕ೦ಡಿರಾ ಕ೦ಡಿದ್ದರೆ ತೋರಿಸಿ.(ನಿರ್ಗಮನ)

No comments:

Post a Comment