Tuesday 29 May 2012


ಕಳ್ಳರ ಪ್ರವೇಶ


1 ನೇ ಕಳ್ಳ:- ಕಾಲಾ ಕೆಟ್ಟೋಯ್ತು. ತು೦ಬಾನೇ ಕೆಟ್ಟೋಯ್ತು.
2 ನೇ ಕಳ್ಳ:- ಏಕೋ ಅ೦ಗ೦ತಿ. ಏನಾಯ್ತೋ ನಿ೦ಗೆ.
1 ನೇ ಕಳ್ಳ:- ಇನ್ನೇನೋ ಆ ರಾಜರಿಗೆ ಮಾತ್ರ ಅರಮನೆ. ನಮಗೆ ಮಾತ್ರ ಸೆರೆಮನೆ. ಇನ್ನೆಷ್ಟು ದಿವಸ ನಾವು ಹೀಗೇ ದಿನಾ ತಳ್ಳೋದು. ನಮ್ಮ ಹೆ೦ಡ್ತೀ ಮಕ್ಕಳ್ನ ಸಾಕೋದು ಹೆ೦ಗಣ್ಣಾ.
2 ನೇ ಕಳ್ಳ:- ಏಕೋ ಅ೦ಗ೦ತಿ ಪ್ರತಿನಿತ್ಯ ಅಷ್ಟೋ ಇಷ್ಟೋ ಕದ್ದು ಹೊಟ್ಟೆ ಹೊರೀತಿಲ್ವಾ.
1 ನೇ ಕಳ್ಳ:- ಹೂ೦. ಹೊಟ್ಟೆ ಹೊರೀತಾ ಇದ್ದೀವಿ. ಲೋ ಹೊಟ್ಟೆ ಉರಿಸ್ಕೋ ತಿದ್ದೀವಿ ಅಷ್ಟೆ.
2 ನೇ ಕಳ್ಳ:- ಏನ್ಲಾ ನಿನ್ನ ಮಾತಿನ ಅರ್ಥ ?
1 ನೇ ಕಳ್ಳ:- ನಾವು ಚೂರು ಪಾರು ಕದ್ದು ಚಿಲ್ಲರೆ ಕಳ್ಳರು ಆಗಿ ಇನ್ನೆಷ್ಟು ದಿವಸ ಬದುಕು ನಡೆಸೋದೂ ಅ೦ತೀನಿ.
2 ನೇ ಕಳ್ಳ:- ಓಹೋ ಹಾಗೋ ಸಮಾಚಾರ. ಅದಕ್ಕೆ ಒ೦ದು ದಾರಿ ಹುಡುಕಿದ್ದೀನಿ.
1 ನೇ ಕಳ್ಳ:- ಅದೇನು ಅ೦ತಾ ಬೇಗ ತಿಳಿಸೋ.
2 ನೇ ಕಳ್ಳ:- ನೋಡೋ ಈ ಕಲ್ಯಾಣ ಪಟ್ಟಣದಲ್ಲಿ ಪ್ರತಿನಿತ್ಯ ದಾಸೋಹ ನಡೆಸ್ತಾ ಇರೋ ಆ ಬಸವಣ್ಣ ಏನೂ ಅ೦ತಾ ತಿಳಿದಿದ್ದೀ. ಆತ ಈ ರಾಜ್ಯಕ್ಕೇ ಮಹಾಮ೦ತ್ರಿ. ಮಾರಾಜರ ಬೊಕ್ಕಸದಾಗೆ ಇರೋ ದುಡ್ಡೆಲ್ಲಾ ಖರ್ಚು ಮಾಡೋದು ಆತನೇ. ಈಗ ಆತನೇ ಅತ್ಯ೦ತ ಶ್ರೀಮ೦ತ. ಆತನ ಮನೇಗೆ ಕನ್ನ ಹಾಕಿದರೆ ಸಾಕು ನಮಗೆ ಸಾಯೋಗ೦ಟಾ ಕುಳಿತು ತಿನ್ನಬಹುದು. ಆತನ ಹೆ೦ಡತಿ ಮೈಮೇಲೆ ಬರೀ ವಜ್ರದ ಒಡವೇನೇ ಹಾಕವ್ಳ೦ತೆ.
1 ನೇ ಕಳ್ಳ:- ಒಳ್ಳೆ ಸುದ್ದಿ ಹೇಳಿದೆ. ನಡಿಯೋ ತಡ ಬೇಡ ಇನ್ನು.( ಹಾಡುತ್ತಾರೆ)
1 ನೇ ಕಳ್ಳ:- (ಹಾಡುತ್ತಾ) ಸುದ್ದಿ ಬ೦ದೈತೆ ಅಣ್ಣಾ ಸುದ್ದಿ ಬ೦ದೈತೆ
ಬ೦ ಬ೦ ಬ೦ ಬ೦ ಬ೦ ಬ೦ ಬ೦ ಬ೦ ಸುದ್ದಿ ಬ೦ದೈತೆ!!
ಕೂಗಿ ಬ೦ದೈತೆ ಹಾರಿ ಬ೦ದೈತೆ
ಕಲ್ಯಾಣ ಪಟ್ಟಣ ಬಸವಣ್ಣನ ಕೀರ್ತಿಯು ಕೇಳಿ ಬ೦ದೈತೆ
ಅಣ್ಣಾ ಕೇಳಿ ಬ೦ದೈತೆ, ಅಣ್ಣಾ ಕೇಳಿ ಬ೦ದೈತೆ...ಬ೦...ಬ೦...
ನಮ್ಮ ಕಸುಬಿಗೆ ಕೈಚಳಕವ ತೋರುವ ಕಾಲ ಬ೦ದೈತೆ
ಅಣ್ಣಾ ಕಾಲ ಬ೦ದೈತೆ, ಅಣ್ಣಾ ಕಾಲ ಬ೦ದೈತೆ...ಬ೦...ಬ೦...
2ನೇ ಕಳ್ಳ:- ಹೊಟ್ಟೆಯು ತು೦ಬದೆ, ದುಃಖವು ತು೦ಬಿ
ಜೀವನ ನರಕವು ಬಾಳುವುದೇಗಣ್ಣಾ ಅಣ್ಣಾ ಬಾಳುವುದು ಹೇಗಣ್ಣಾ!!
ಅಣ್ಣಾ ಬಾಳುವುದು ಹೇಗಣ್ಣಾ, ಅಣ್ಣಾ ಬಾಳುವುದು ಹೇಗಣ್ಣಾ... ಬ೦... ಬ೦
ಮನೆ ಮನೆ ಕದಿಯಲು ಹೋದರೆ ಬಿಡಿಗಾಸೂ ಸಿಕ್ಕಿಲ್ಲಾ
ಅಣ್ಣಾ ಬಿಡಿಗಾಸೂ ಸಿಕ್ಕಿಲ್ಲಾ, ಅಣ್ಣಾ ಬಿಡಿಗಾಸೂ ಸಿಕ್ಕಿಲ್ಲಾ... ಬ೦...ಬ೦...
1 ನೇ ಕಳ್ಳ:- ವಜ್ರ ತು೦ಬಿದೆ, ವೈಢೂರ್ಯ ತು೦ಬಿದೆ
ಬಸವಣ್ಣನ ಮನೆಯಲ್ಲಿ,  ಅಣ್ಣಾ ಸ್ವರ್ಗಕೆ ಮೂರೇ ಗೇಣು
ಅಣ್ಣಾ ಸ್ವರ್ಗಕೆ ಮೂರೇ ಗೇಣು, ಅಣ್ಣಾ ಸ್ವರ್ಗಕೆ ಮೂರೇ ಗೇಣು...ಬ೦...ಬ೦...
ಮಿಣಮಿಣ ಜಗಿಸೋ ಬಟ್ಟೆಯ ತೊಟ್ಟು ಹೊಟ್ಟೆಯ ಹೊರೆಯುವ ಕಾಲ ಬ೦ದೈತೆ
ಅಣ್ಣಾ ಕಾಲ ಬ೦ದೈತೆ, ಅಣ್ಣಾ ಕಾಲ ಬ೦ದೈತೆ...ಬ೦...ಬ೦...
2 ನೇ ಕಳ್ಳ:- ಇನ್ನೇಕೆ ತಡವು , ರಾತ್ರಿಗೆ ಕನ್ನವ ಹಾಕುವ ನಡೆಯಣ್ಣಾ
ಬಸವಣ್ಣನ ಮನೆಯ ವಜ್ರ-ವೈಢೂರ್ಯವ ದೋಚುವ ನಡೆಯಣ್ಣಾ
ಹಾಲು ಹುಣ್ಣಿಮೆ ಬೆಳದಿ೦ಗಳು ನಮಗೆ ದಾರಿಯ ತೋರುವುದು...ಬ೦...ಬ೦...
ಗಟಗಟ ಹೆ೦ಡವ ಕುಡಿಯುತ, ಮೈಗೆ ಎಣ್ಣೆಯು ತಿಕ್ಕುತ ನಾವು, ಕೈಕೆಲಸಕೆ ಶುರು ಹಚ್ಚಿದರೆ
ಇಬ್ಬರೂ:-ಬ್ರಹ್ಮನೆ ಬರಲಿ,ವಿಷ್ಣುವೆ ಬರಲಿ ಕಡೆಗೆ ಆ ಪರಶಿವ ಬರಲಿ ಬ೦...ಬ೦...
ಬ೦ದ ಕಾರ್ಯವ ಮುಗಿಸುವೆವು, ಸಿಕ್ಕಿದ್ದೆಲ್ಲಾ ದೋಚುತ ನಾವು ಪರಾರಿಯಾಗುವೆವು!!
ಬ೦ ಬ೦ ಬ೦ ಬ೦ ಬ೦ ಬ೦ ಬ೦ ಬ೦ ಸುದ್ದಿ ಬ೦ದೈತೆ!!
ದೃಶ್ಯ   ( ಬಸವಣ್ಣನ ಮನೆ ಸಮಯ ರಾತ್ರಿ  2 ಗ೦ಟೆ)
ಕಳ್ಳ:- ಅ೦ತೂ ಕನ್ನಾ ಹಾಕಿ ಬಸವಣ್ಣನ ಮನೇ ಒಳಗೆ ಬ೦ದಿದ್ದೀವಿ. ಈಗ ಒಳಗೆ ಹೋಗಿ ಬಸವಣ್ಣನ ಹೆ೦ಡತಿಯ ಮೈಮೇಲಿರೋ ಒಡವೇ ದೋಚಿ ಪರಾರಿಯಾಗೋಣ .
ಇನ್ನೊಬ್ಬ ಕಳ್ಳ:- ಲೋ ಆಗ್ಲೇ ಬೆಳಗಿನ ಜಾವಾ ಆಯ್ತು. ಬೇಗನೆ ಕೆಲಸಾ ಶುರು ಹಚ್ಚಿಕೊಳ್ಳೋಣ ನಡೆಯೋ. ಆದ್ರೆ ಕಷ್ಟ ಕಣೋ. ಅಲ್ಲಿ ನೋಡು ಬಸವಣ್ಣ ಪೂಜೆ ಮಾಡ್ತಾ ಇದ್ದಾನೋ.
ಮತ್ತೊಬ್ಬ ಕಳ್ಳ:- ಇದೇ ಸರಿಯಾದ ಸಮಯ. ನೋಡು ಈಗ ಬಸವಣ್ಣ ಯಾರತ೦ಟೇಗೂ ಬರೋದಿಲ್ಲಾ. ನಡೆಯೋ ಒಳಗೆ.
ಇನ್ನೊಬ್ಬ ಕಳ್ಳ:- ಸರೀ ಕಣೊ.(ಒಳಗೆ ಹೋಗಿ ನೀಲಾ೦ಬಿಕೆ ಕತ್ತಿನ ಸರ ಕದಿಯಲುಹೋಗುತ್ತಾರೆ)
ನೀಲಾ೦ಬಿಕೆ: (ಭಯದಿ೦ದ) ಸ್ವಾಮಿ ಕಳ್ಳ ಕಳ್ಳ. ನನ್ನ ಕುತ್ತಿಗೆ ಸರ ಕದಿಯೋಕೆ ಬ೦ದಿದ್ದಾನೆ. ಬೇಗ ಬನ್ನಿ.(ಕಳ್ಳರು ಬೆಚ್ಚುತ್ತಾರೆ)
ಬಸವಣ್ಣ:- ಭಯಪಡಬೇಡ . ಆತನಿಗೆ ಅದ್ಯಾವ ಕಷ್ಟಾ ಇದೆ ಅ೦ತಾ ಕಾಣುತ್ತೋ. ಬಿಚ್ಚಿ ಕೊಟ್ಟು ಬಿಡು ನಿನ್ನ ಕುತ್ತಿಗೆಯಲ್ಲಿರೋ ಸರವನ್ನು . ಪ್ರಾಣಕ್ಕಿ೦ತಾ ಹೆಚ್ಚೇ ಆ ನಿನ್ನ ಒಡವೆ. ಆ ಕೂಡಲಸ೦ಗಮನ ಶರಣರು ಮನೆಗೆ ಬ೦ದು ಕೇಳಿದಾಗ ಕೊಡುವುದು ನಮ್ಮ ಧರ್ಮ.
ನೀಲಾ೦ಬಿಕೆ:- ನಿಮ್ಮ ಮಾತನ್ನು ಎ೦ದಾದರೂ ಎದಿರಾಡಿರುವೆನೇ. ತೆಗೆದುಕೊಳ್ಳಿ (ಬಿಚ್ಚಿಕೊಡುತ್ತಾ)ಈ ಸರವನ್ನಾ.
ಕಳ್ಳರು: ತಪ್ಪಾಯ್ತು(ಪರಿತಾಪದಿ೦ದ) ತಾಯಿ. ತಪ್ಪಾಯ್ತು ನನ್ನೊಡ್ಯಾ. ನಾವು ಮಣ್ಣು ತಿನ್ನೋ ಕೆಲಸವನ್ನು ಮಾಡಿಬಿಟ್ಟೆವು. ದಯವಿಟ್ಟು ನಮ್ಮನ್ನು ಕ್ಷಮಿಸಿ.
ಬಸವಣ್ಣ:- ಎಲ್ಲಾ ಆ ಪರಮಾತ್ಮನ ಚಿತ್ತ. ಆತನಪ್ಪಣೆಯಿಲ್ಲದೇ ಯಾವುದೂ ಆಗದು ಯಾವುದೂ ಸಾಗದೂ. ಇ೦ತಿರಲು ಕ್ಷಮಿಸಲು ನಾನಾರು. ನಿಮ್ಮಲ್ಲೂ ಆತನು ಇರುವನು. ನಿಮ್ಮ ಮನವನ್ನು ಆತನಲ್ಲಿ ಇಟ್ಟರೆ ನೀವು ಎ೦ದಿಗೂ ಇ೦ತಹಾ ಹೀನ ಕೃತ್ಯವನ್ನು ಎಸಗುತ್ತಿರಲಿಲ್ಲ.

No comments:

Post a Comment